ದೇವದುರ್ಗ
ಭಾರತದ ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಒಂದು ತಾಲ್ಲೂಕು; ಆ ತಾಲ್ಲೂಕಿನ ಆಡಳಿತ ಕೇಂದ್ರ. ಗುಲ್ಬರ್ಗ ಮತ್ತು ರಾಯಚೂರು ಜಿಲ್ಲೆಗಳ ನಡುವೆ ಹರಿಯುವ ಕೃಷ್ಣಾ ನದಿ ತಾಲ್ಲೂಕಿನ ಉತ್ತರದ ಎಲ್ಲೆ. ತಾಲ್ಲೂಕಿನ ಪಶ್ಚಿಮದಲ್ಲಿ ಲಿಂಗಸೂಗೂರು ತಾಲ್ಲೂಕು ದಕ್ಷಿಣದಲ್ಲಿ ಮಾನ್ವಿ ತಾಲ್ಲೂಕು ಪೂರ್ವದಲ್ಲಿ ರಾಯಚೂರು ತಾಲ್ಲೂಕು ಇವೆ. ತಾಲ್ಲೂಕಿನ ವಿಸ್ತೀರ್ಣ 1,541.3 ಚ.ಕಿ.ಮೀ. ಜನಸಂಖ್ಯೆ 2,04,074 (2001). ತಾಲ್ಲೂಕಿನಲ್ಲಿ ದೇವದುರ್ಗ, ಗಬ್ಬೂರು, ಜಾಲಹಳ್ಳಿ ಮತ್ತು ಅರಕೇರ ಹೋಬಳಿಗಳೂ ಒಟ್ಟು 167 ಗ್ರಾಮಗಳೂ ಇವೆ. ತಾಲ್ಲೂಕಿನ ಹೆಚ್ಚು ಭಾಗ ನೀಸ್ ಶಿಲೆಗಳಿಂದ ಆದ್ದು. ಅಲ್ಲಲ್ಲಿ ಸಣ್ಣ ಬೆಟ್ಟಗುಡ್ಡಗಳಿವೆ. ಇವುಗಳಲ್ಲಿ ಮುಖ್ಯವಾದವು ಕೆರೆಗುಡ್ಡ, ಮೊಸರಕಲ್ಲುಗುಡ್ಡ, ಕಾಕರಕಲ್ ಗುಡ್ಡ, ಜಿನ್ನಾಪುರ್, ಜಗತ್ ಕಲ್, ಕರಡಿಗುಡ್ಡ, ಮಲಾಡ್‍ಕಲ್ ಮತ್ತು ರಾಮದುರ್ಗ ಇವುಗಳಲ್ಲಿ ಮೊಸರಕಲ್ಲುಗುಡ್ಡ ಮತ್ತು ಕರೆಗುಡ್ಡ ಅತ್ಯಂತ ದೊಡ್ಡವು. ಗಬ್ಬೂರ್ ಹೋಬಳಿಯಲ್ಲಿರುವ ಅನೇಕ ಸಣ್ಣ ಗುಡ್ಡಗಳು ನೀಸ್ ಶಿಲೆಗಳಿಂದಾದವು. ಭೂಪ್ರದೇಶ ಕೆಲವೆಡೆ ಒಡಕು; ಮೇಲ್ಪದರದಲ್ಲಿ ತೆಳುವಾದ ಕೆಂಪು ಜೇಡಿಮಣ್ಣು ಇದೆ. ಆದರೆ ತಾಲ್ಲೂಕಿನ ಉತ್ತರ ಭಾಗದಲ್ಲಿ, ಎಂದರೆ ಕೃಷ್ಣಾನದಿ ಹರಿಯುವೆಡೆ, ನೆಲ ಮಟ್ಟಸವಾಗಿದ್ದು ಫಲವತ್ತಾದ ಮೆಕ್ಕಲು ಮಣ್ಣಿನಿಂದ ಕೂಡಿದೆ. ಕೆಲವೆಡೆ ಮರಳು ಮಿಶ್ರಿತ ಕೆಂಪು ಮಣ್ಣು ಇದೆ. ಕೃಷ್ಣಾ ಈ ತಾಲ್ಲೂಕಿನ ಮುಖ್ಯ ನದಿ. ತಾಲ್ಲೂಕಿನ ಉತ್ತರದ ಗಡಿಯಾಗಿರುವ ಈ ನದಿಯನ್ನು ಅನೇಕ ಸಣ್ಣ ತೊರೆಗಳೂ ಸಂಗಮಿಸುತ್ತದೆ.

ದೇವದುರ್ಗ ತಾಲ್ಲೂಕಿನದು ಉಷ್ಣವಲಯದ ಶುಷ್ಕ ವಾಯುಗುಣ, ವರ್ಷವೆಲ್ಲ ವಾತಾವರಣದಲ್ಲಿ ಹೆಚ್ಚು ಶುಷ್ಕತೆ ಇರುವುದರಿಂದ ಸೆಕೆ ಹೆಚ್ಚು. ಉಷ್ಣತೆ ಡಿಸೆಂಬರ್ ತಿಂಗಳಲ್ಲಿ 63.90 ಈ (17.70); ಮೇ ತಿಂಗಳಲ್ಲಿ ಗರಿಷ್ಠ. 103.70 ಈ (39.80 ಅ) ನೈಋತ್ಯ ಮಾನ್‍ಸೂನ್ ಕಾಲದಲ್ಲೂ ಇಲ್ಲಿಯ ಹವಾಗುಣದಲ್ಲಿ ಅಷ್ಟಾಗಿ ಆದ್ರ್ರತೆ ಇರುವುದಿಲ್ಲ. ವಾರ್ಷಿಕ ಮಳೆ  729.2 ಮಿಮೀ. ಇಲ್ಲಿ ಕಾಡುಗಳು ಅಷ್ಟಾಗಿ ಇಲ್ಲ. ಕೃಷ್ಣಾನದಿಯ ಕೆಳದಂಡೆಯಲ್ಲಿ ಕೆಲವೆಡೆ ಮಾತ್ರ ಅಲ್ಪಸ್ವಲ್ಪ ಕಾಡುಗಳುಂಟು. ಸೌದೆಯ ಮರಗಳು, ಕೆಲವು ಜಾತಿಯ ಹಣ್ಣಿನ ಮರಗಳು, ಹುಣಸೆ ಮರಗಳು ಯಥೇಚ್ಛವಾಗಿವೆ.

ದೇವದುರ್ಗ ತಾಲ್ಲೂಕಿನ ಒಟ್ಟು 3,72,677 ಎಕರೆಗಳಲ್ಲಿ 2,94,567 ಎಕರೆ ನೆಲ ಸಾಗುವಳಿಗೆ ಒಳಪಟ್ಟಿದೆ. ಉಳಿದ ಭಾಗದಲ್ಲಿ ಬೆಟ್ಟಗುಡ್ಡಗಳು, ಕಾಡುಗಳು, ಕೆರೆ ಕಟ್ಟೆಗಳು ಮತ್ತು ವಸತಿಗಳು ಇವೆ. ಒಟ್ಟು ವ್ಯವಸಾಯ ಪ್ರದೇಶದಲ್ಲಿ ಖುಷ್ಕಿ ಬೆಳೆಗಳಾದ ರಾಗಿ, ಜೋಳ, ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ಬೆಳೆಯುವರು. ಕೆಲವು ಪ್ರದೇಶಗಳಲ್ಲಿ ಮಾತ್ರ ಕೆರೆ ಬಾವಿ ಕಾಲುವೆ ಸೌಲಭ್ಯದಿಂದ ಭತ್ತ, ಕಬ್ಬು ಬೆಳೆಯುತ್ತಾರೆ. ಭದ್ರ ಜಲಾಶಯದ ಎಡದಂಡೆ ಕಾಲುವೆಗಳಿಂದ ಈ ತಾಲ್ಲೂಕಿನ ದಕ್ಷಿಣದಲ್ಲಿಯ ಕೇವಲ 8 ಗ್ರಾಮಗಳ ಜಮೀನಿಗೆ ನೀರೊದಗುತ್ತದೆ. ಇಲ್ಲಿ ಬಹು ಹಿಂದಿನಿಂದಲೂ ಪರ್ಷಿಯನ್ ಚಕ್ರದ ಸಹಾಯದಿಂದ ಬಾವಿಗಳಿಂದ ನೀರೆತ್ತಿ ಜಮೀನಿಗೆ ಹಾಯಿಸುವ ಪದ್ಧತಿ ಇದೆ. ಅನೇಕ ಕಡೆಗಳಲ್ಲಿ ಪಂಪ್ ಸೆಟ್‍ಗಳ ಸಹಾಯದಿಂದ ನೀರನ್ನೆತ್ತಿ ವ್ಯವಸಾಯ ಮಾಡಲಾಗುತ್ತಿದೆ. ತಾಲ್ಲೂಕಿನ ಉತ್ತರದ ಕೃಷ್ಣಾ ನದಿಯ ಬಲದಂಡೆಯ ಉದ್ದಕ್ಕೂ ಪಂಫ್‍ಸೆಟ್‍ಗಳಿವೆ. ಸರ್ಕಾರದ ಸಹಾಯದಿಂದ ರೂ. 87,000 ವೆಚ್ಚದಲ್ಲಿ ನದಿಯ ದಡದಲ್ಲಿ ನೀರೆತ್ತುಗೆ ಕಾರ್ಯಕ್ರಮವೊಂದನ್ನು ಜಾರಿಗೆ ತಂದು ಅಮರಾವತಿ ಹಳ್ಳಿಯ ಸುಮಾರು 1,032 ಎಕರೆ ಜಮೀನಿಗೆ ನೀರನ್ನು ಒದಗಿಸಲಾಗುವುದು. ಈ ತಾಲ್ಲೂಕಿನಲ್ಲಿ ಸುಮಾರು 71 ಕೆರೆಗಳಿವೆ. ಅವುಗಳಲ್ಲಿ 58 ಕೆರೆಗಳು 50 ಎಕರೆಗಳಿಗಿಂತ ಹೆಚ್ಚು ಅಚ್ಚುಕಟ್ಟಿನಿಂದ ಕೂಡಿದೆ. ಇವುಗಳಿಂದ ಸುಮಾರು 1000 ಎಕರೆಗಳಿಗೂ ಹೆಚ್ಚು ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆತಿವೆ. ತಾಲ್ಲುಕಿನ ಮುಖ್ಯ ಬೆಳೆಗಳು ಬತ್ತ, ರಾಗಿ, ಜೋಳ, ಕಬ್ಬು , ಹತ್ತಿ, ತೆಂಗು ಮತ್ತು ಅಡಿಕೆ. ಬೇಸಾಯ ಜನರ ಮುಖ್ಯ ಕಸುಬು. ಹತ್ತಿಬಟ್ಟೆಯ ನೆಯ್ಗೆ ಮಡೆಕೆ ತಯಾರಿಕೆ, ಮರಗೆಲಸ - ಇವು ಇತರ ಕಸಬುಗಳು. ದೇವದುರ್ಗ ತಾಲ್ಲೂಕಿನ ಮುಖ್ಯ ರಸ್ತೆಗಳು ಇವೆ: ದೇವದುರ್ಗ - ಗಬ್ಬೂರು ಜಿಲ್ಲಾ ರಸ್ತೆ, ರಾಜ್ಯ ಹೆದ್ದಾರಿ ಕೂಡುವ ಗಬ್ಬೂರು - ಕಲವಾಲಿ - ರಾಯಚೂರು ರಸ್ತೆ, ಗುಲ್ಬರ್ಗಕ್ಕೆ ಹೋಗುವ ದೇವದುರ್ಗ - ಶಹಾಪುರ ರಸ್ತೆ.

ದೇವದುರ್ಗ ಪಟ್ಟಣದ ಜನಸಂಖ್ಯೆ 21,992 (2001). ಇದು ಸ್ಥೂಲವಾಗಿ ರಾಯಚೂರಿನ ಪಶ್ಚಿಮಕ್ಕೆ 34 ಚಮೈ. ದೂರದಲ್ಲಿದೆ. ಸಮುದ್ರಮಟ್ಟದಿಂದ 400 ಮೀ. ಎತ್ತರದಲ್ಲಿದೆ. ಹಿಂದೆ ಇದು ಬೀದರ್ ಪಾಳೆಯಗಾರರ ಪ್ರಬಲ ಕೇಂದ್ರವಾಗಿತ್ತು. ಇಲ್ಲೊಂದು ಹಳೆಯ ಕೋಟೆ ಇದೆ. ಈ ಊರಿನ ಹತ್ತಿರ ಇರುವ ಗುಡ್ಡದಲ್ಲಿ ಅಭ್ರಕ ದೊರೆಯುತ್ತದೆ.  ಇಲ್ಲಿಯ ವಾರ್ಷಿಕ ಮಳೆ 645.06 ಮಿಮೀ. ಗರಿಷ್ಠ ಕನಿಷ್ಠ ಉಷ್ಣತೆಗಳು ಅನುಕ್ರಮವಾಗಿ 42.70 ಛಿ ಮತ್ತು 13.80 ಛಿ ಇಲ್ಲೊಂದು ಪುರಸಭೆ ಇದೆ. ಆಸ್ಪತ್ರೆ, ಪ್ರೌಢಶಾಲೆ ಮತ್ತು ಇತರ ಶಾಲೆಗಳು ಇವೆ. ಇಲ್ಲಿಂದ ಹೊರಹೋಗುವ ಮೂರು ಮುಖ್ಯ ಪದಾರ್ಥಗಳು ಹತ್ತಿ, ನೆಲಗಡಲೆ, ಮತ್ತು ಜೋಳ, ಇಲ್ಲಿಗೆ ಅಕ್ಕಿ, ಗೋಧಿ, ಖಂಡಸಾರಿ ಸಕ್ಕರೆ ಮುಂತಾದವು ಹೊರಗಡೆಯಿಂದ ಬರುತ್ತವೆ. ದೇವದೂತರು: ದೇವರ ಸೇವೆಯಲ್ಲಿದ್ದು ಅವನ ಅನುಜ್ಞೆಯಂತೆ ದುಷ್ಟ ನಿಗ್ರಹ ಶಿಷ್ಟ ಪರಿಪಾಲನೆಗಳಲ್ಲಿ ತೊಡಗಿರುವ ದೂತರು (ಏಂಜಲ್ಸ್). ಇವರು ದಿವ್ಯಪುರುಷರು. ಯಹೂದಿ ಕ್ರೈಸ್ತ ಇಸ್ಲಾಂ ಮತ್ತು ಇತರ ಧರ್ಮಗಳಲ್ಲಿ ದೇವದೂತರು ಇರುವುದನ್ನು ಕಾಣಬಹುದು. 								(ಆರ್.ಸಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ